ಸ್ಟಾರ್ ಹೆಲ್ತ್ ಇನ್ಶುರನ್ಸ್ ಕಂಪನಿಯವರು ಕನ್ನಡ ವಾಹಿನಿಗಳಲ್ಲಿ ಹಿಂದಿಯ ಜಾಹೀರಾತನ್ನು ಹಾಕುತ್ತಿರುವುದರ ಬಗೆಗೆ ಗೆಳೆಯರಬ್ಬರು ಕನ್ನಡದ ವಾಹಿನಿಗಳಲ್ಲಿ ಕನ್ನಡದಲ್ಲಿಯೇ ಜಾಹೀರಾರನ್ನು ಹಾಕಿರಿ ಎಂದು ತಿಳಿಸಿದ್ದರು. ಅದಕ್ಕೆ ಸ್ಟಾರ್ ಹೆಲ್ತ್ ಇನ್ಶುರೆನ್ಸ್ ನವರು ಕೊಟ್ಟ ಉತ್ತರ ಅಚ್ಚರಿ ತರುವಂತಿತ್ತು.
ಹಿಂದಿಯಲ್ಲಿಯೇ ಜಾಹೀರಾತನ್ನು ಹಾಕುವುದರ ಬಗೆಗೆ ಕೊಟ್ಟ ಸಮರ್ಥನೆಗಳು
ಹಿಂದಿ ನಮ್ಮ ರಾಷ್ಟ್ರ ಭಾಷೆ
ಹಿಂದಿಯಿಂದ ಕರ್ನಾಟಕದ ಜನರನ್ನು ಚೆನ್ನಾಗಿ ಮುಟ್ಟಬಹುದು
ಐದು ವರ್ಷಗಳಿಂದ ಹೀಗೆಯೇ ಮಾಡ್ತ ಬಂದಿದೀವಿ, ಮುಂದೆಯೂ ಹೀಗೆ ಮಾಡ್ತೀವಿ
ಹಿಂದಿ ನಮ್ಮ ರಾಷ್ಟ್ರ ಭಾಷೆ
ಸಂವಿಧಾನದ ಪ್ರಕಾರ ನಮ್ಮ ದೇಶಕ್ಕೆ ಯಾವುದೇ ರಾಷ್ಟ್ರ ಭಾಷೆಯಿಲ್ಲ. ಈ ಬಗೆಗೆ ಗುಜರಾತ್ ನ ಹೈ ಕೋರ್ಟ್ ನಲ್ಲಿ ತೀರ್ಪು ನೀಡಲಾಗಿದೆ. ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವವರಿಗೂ ಸಹ ಈ ಬಗೆಗೆ ತಿಳಿಯದಿರುವುದು ನಿಜವಾಗಿಯೂ ಅಚ್ಚರಿ ಮೂಡಿಸುತ್ತದೆ.
ಹಿಂದಿಯಿಂದ ಕರ್ನಾಟಕದ ಜನರನ್ನು ಚೆನ್ನಾಗಿ ಮುಟ್ಟಬಹುದು
Marketing ತಂಡದವರಿಗೆ ಜಾಹೀರಾತುಗಳನ್ನು ಜನರಿಗೆ ಅರ್ಥವಾಗದ ಭಾಷೆಯಲ್ಲಿ ಬಿತ್ತರಿಸಿದರೆ ಜನರಿಗೆ ಮುಟ್ಟುವುದಿಲ್ಲ ಅನ್ನುವ ಕನಿಷ್ಠ ಅರಿವೂ ಇಲ್ಲ ಎನಿಸುವುದು. ಕನ್ನಡ ವಾಹಿನಿಯನ್ನು ನೋಡುವವರಿಗೆ ಕನ್ನಡ ಚೆನ್ನಾಗಿ ಬರುವುದೇ ಹೊರತು ಹಿಂದಿಯಲ್ಲ. ಹಿಂದಿ ಬರುವವರು ಇದ್ದರೂ ಕನ್ನಡವನ್ನೆ ನೋಡಲೆಂದು ಬಯಸುವರೇ ಹೊರತು ಹಿಂದಿಯೋ ಅಥವಾ ಇನ್ನ್ಯಾವುದೋ ಭಾಷೆಯನ್ನಲ್ಲ. ಕರ್ನಾಟಕದಲ್ಲಿ ಹಿಂದಿಗೆ ಒಳ್ಳೆಯ ಮಾರುಕಟ್ಟೆಯಿದೆಯೋ ಅಥವಾ ಕನ್ನಡಕ್ಕೆ ಇದೆಯೋ ಅಂತ ತಿಳಿಯಲು ಕರ್ನಾಟಕದಲ್ಲಿ ಎಷ್ಟು ಕನ್ನಡ ಪತ್ರಿಕೆಗಳು ಓಡುತ್ತದೆ ಹಾಗು ಎಷ್ಟು ಹಿಂದಿ ಪತ್ರಿಕೆಗಳು ಓಡುತ್ತದೆ ಅಂತ ನೋಡಿದರೆ ಸಾಕು.
ಐದು ವರ್ಷಗಳಿಂದ ಹೀಗೆಯೇ ಮಾಡ್ತ ಬಂದಿದೀವಿ, ಮುಂದೆಯೂ ಹೀಗೆ ಮಾಡ್ತೀವಿ
ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳೋದು ಎಂದರೆ ಇದೆ. ಕೆಲ ವರ್ಷಗಳ ಹಿಂದಿನ ತನಕ ಬರಿ ಹಿಂದಿ ಹಾಡುಗಳನ್ನು ಹಾಕಿಕೊಂಡು ಭಾನುವಾರದ ಒಂದು ಘಂಟೆ "South Indian" ಹಾಡುಗಳ ಜೊತೆಗೆ "ಕನ್ನಡ ಹಾಡುಗಳನ್ನು ಸಹ " ಹಾಕುತ್ತಿದ್ದ ಪರಿಸ್ಥಿತಿ ಇತ್ತು. ಬೆಂಗಳೂರಿನಲ್ಲಿ ಹಿಂದಿಗೆ ಬೇಡಿಕೆ ಇರುವುದು ಕನ್ನಡಕ್ಕಲ್ಲ ಅಂತ ಎಲ್ಲರೂ ನಂಬಿದ್ದರು. ಆದರೆ ಯಾವಾಗ ಒಂದು ವಾಹಿನಿಯಲ್ಲಿ ಕನ್ನಡದ ಹಾಡುಗಳನ್ನು ಹಾಕಿ ಕೇಳುಗರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿತೋ ಆಗ ಇತರೆ ವಾಹಿನಿಗಳು ನಾ ಮುಂದೆ ತಾ ಮುಂದೆ ಅಂತ ಕನ್ನಡದ ಹಾಡುಗಳನ್ನು ಹಾಕಲು ಶುರು ಮಾಡಿದರು.
ಕನ್ನಡದ ವಾಹಿನಿಗಳಲ್ಲಿ ಹಿಂದಿ ಜಾಹೀರಾತನ್ನು ಹಾಕುವುದು pizza hut ನಲ್ಲಿ ಮಸಾಲೆ ದೋಸೆ ಕೊಟ್ಟಂತೆ. ಜಾಹೀರಾತುಗಳಿಂದ ಹೆಚ್ಚು ಜನರಿಗೆ ಹೇಗೆ ತಲುಪುವುದು ಹೇಗೆ ಅಂತ ಸ್ವಂತತೆಯಿಂದ ಯೋಚಿಸಿದರೆ ಕನ್ನಡದಲ್ಲಿ ಜಾಹೀರಾತುಗಳನ್ನು ಹಾಕುವುದರ ಪ್ರಾಮುಖ್ಯತೆ ಇವರಿಗೆ ಗೊತ್ತಾದೀತು.
ನಾವೇನು ಮಾಡಬಹುದು?
ನಮ್ಮ ಭಾಷೆಗೆ ನಮ್ಮ ನಾಡಿನಲ್ಲಿ ಸರಿಯಾದ ಸ್ಥಾನಮಾನ ಕಲ್ಪಿಸಿ ಕೊಡುವುದು ನಮ್ಮೆಲ್ಲರ ಜವಾಬ್ದಾರಿ. ಹಾಗೆಯೆ ಒಂದು ಮಾರುಕಟ್ಟೆ ಸರಿಯಾದ ಮಾರ್ಗದಲ್ಲಿ ಹೋಗಲು ಹಾಗೂ ಸರಿಯಾಗಿ ಕೆಲಸ ಮಾಡಲು ಗ್ರಾಹಕರು ಸರಿಯಾದ ಹಿನ್ನುಣಿಕೆ(Feedback) ಕೊಡುವುದು ಅತಿ ಮುಖ್ಯ. ಇವರಿಗೆ ಮಿಂಚೆಗಳನ್ನು ಬರೆದು ನಮಗೆ ಇಷ್ಟವಾಗುವಂತೆ ಕನ್ನಡದಲ್ಲಿ ಜಾಹೀರಾತು ಹಾಕಿ ನಮ್ಮನ್ನು ತಲುಪಿರಿ ಎಂದು ತಿಳಿಸೋಣ. ಅವರ ಮಿನ್ಚೆ ವಿಳಾಸ: support@starhealth.in
